ನಿಯಾರ್ಕಸ್ -
	ಮರಣ ಬಹುಶಃ ಕ್ರಿ.ಪೂ. 312ರಲ್ಲಿ. ಅಲೆಗ್ಸಾಂಡರ್ ಮಹಾಶಯನ ದಳಪತಿ. ಅವನೊಡನೆ ಭಾರತಕ್ಕೆ ಬಂದಿದ್ದ. ಕ್ರೀಟ್ ದ್ವೀಪದಲ್ಲಿ ಹುಟ್ಟಿದ ಈತ ಮ್ಯಾಸಿಡೋನಿಯಕ್ಕೆ ಬಂದು ಅಲೆಗ್ಸಾಂಡರನ ಸಹಪಾಠಿಯಾಗಿದ್ದ. ಅಲೆಗ್ಸಾಂಡರನ ಆಜ್ಞೆಯಂತೆ ಇವನು ಯುಫ್ರೇಟಿಸ್ ನದೀಮುಖದಿಂದ ಈಗಿನ ಸೂಯೆಜ್ó ವರೆಗೆ ಯಾನ ಮಾಡಿದ. ಅಲೆಗ್ಸಾಂಡರ್ ಹೊಸದಾಗಿ ಗೆದ್ದ ಲಿಸಿಯ ಪಾಂಪಿಲಿಯಗಳಿಗೆ ಇವನನ್ನು ಸತ್ರಪನಾಗಿ ನೇಮಿಸಿದ (333). ನಿಯಾರ್ಕಸ್ ಒಬ್ಬ ಇತಿಹಾಸಕಾರನೂ ಹೌದು. ಅಲೆಗ್ಸಾಂಡರ್ ತನ್ನೊಡನೆ ಭಾರತಕ್ಕೆ ಕರೆತಂದಿದ್ದ ವಿದ್ವಾಂಸರು, ವಿಜ್ಞಾನಿಗಳು ಮತ್ತು ಇತಿಹಾಸಕಾರರಲ್ಲಿ ನಿಯಾರ್ಕಸ್ ಮುಖ್ಯವಾದವನು. ಅಲೆಗ್ಸಾಂಡರ್ ಭಾರತದಿಂದ ಹಿಂದಿರುಗುವಾಗ ಇವನು ನೌಕಾಸೇನಾಧಿಪತಿಯಾಗಿದ್ದು ಸಿಂಧೂ ನದಿಯಿಂದ ಪರ್ಷಿಯ ಕೊಲ್ಲಿಯ ವರೆಗೆ ಯಾತ್ರೆ ಮಾಡಿ (325), ಅದರ ವಿವರವಾದ ವರದಿಯನ್ನು ಬರೆದ. ಆ ಕಾಲದ ಆರ್ಥಿಕ ಸಾಮಾಜಿಕ ಪರಿಸ್ಥಿತಿಯನ್ನು ಅರಿಯಲು ಇತಿಹಾಸಕಾರರು ಈತನ ಬರೆವಣಿಗೆಯನ್ನು ಅವಲಂಬಿಸಿದ್ದಾರೆ. ಅಲೆಗ್ಸಾಂಡರನ ಮರಣಾನಂತರ (323) ನಡೆದ ಸೇನಾಧಿಪತ್ಯಗಳ ಹಂಚಿಕೆಯಲ್ಲಿ ನಿಯಾರ್ಕಸ್ ತನ್ನ ಹಿಂದಿನ ಸತ್ರಪಿಗಳನ್ನು ಪಡೆದ. ಉತ್ತರಾಧಿಕಾರದ ಜಗಳಗಳಲ್ಲಿ ಇವನು ಆಂಟಿಗೊನಸ್ 1ನೆಯ ಮಾನಾಫ್ತಾಲ್ಮಾಸನಿಗೆ ಬೆಂಬಲ ನೀಡಿದ.
(ಎಂ.ವಿ.ಎಸ್‍ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ